ಎಲ್ಲಾ ಶಾಸಕಾಂಗಗಳು ತಮ್ಮ ಕಾರ್ಯಕಲಾಪಗಳು ಮತ್ತು ಚರ್ಚೆಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮಾನದಂಡಗಳನ್ನು ಸ್ಥಾಪಿಸಬೇಕು: ಲೋಕಸಭಾ ಸ್ಪೀಕರ್
ಎಲ್ಲಾ ಶಾಸಕಾಂಗಗಳು ತಮ್ಮ ಕಾರ್ಯಕಲಾಪಗಳು ಮತ್ತು ಚರ್ಚೆಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮಾನದಂಡಗಳನ್ನು ಸ್ಥಾಪಿಸಬೇಕು: ಲೋಕಸಭಾ ಸ್ಪೀಕರ್
ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ಎಲ್ಲಾ ಶಾಸಕಾಂಗಗಳು ತಮ್ಮ ಕಾರ್ಯಕಲಾಪಗಳು ಮತ್ತು ಚರ್ಚೆಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮಾನದಂಡಗಳನ್ನು ಸ್ಥಾಪಿಸಬೇಕು ಎಂದು ಒತ್ತಿ ಹೇಳಿದರು. ಸದನದಲ್ಲಿ ಯೋಜಿತ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಓಂ ಬಿರ್ಲಾ, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಡುವೆ ಸಮಗ್ರ ಸಂವಾದದ ಅಗತ್ಯವನ್ನೂ ಒತ್ತಿ ಹೇಳಿದರು. ವಾಸ್ತವಿಕ ಮತ್ತು ವಸ್ತುನಿಷ್ಠ ಚರ್ಚೆಗಳಲ್ಲಿ ತೊಡಗಿರುವ ಚುನಾಯಿತ ಪ್ರತಿನಿಧಿಗಳ ದೃಷ್ಟಿಕೋನಗಳಿಗೆ ಪ್ರಾಮುಖ್ಯತೆ ನೀಡಬೇಕೆಂದು ಅವರು ಮಾಧ್ಯಮಗಳನ್ನು ಆಗ್ರಹಿಸಿದರು, ಇದರಿಂದಾಗಿ ಸದಸ್ಯರಲ್ಲಿ ರಚನಾತ್ಮಕ ಸಂವಾದಕ್ಕಾಗಿ ಆರೋಗ್ಯಕರ ಸ್ಪರ್ಧೆ ಹೊರಹೊಮ್ಮಬಹುದು ಎಂದವರು ಅಭಿಪ್ರಾಯಪಟ್ಟರು.

ಕರ್ನಾಟಕ ಶಾಸಕಾಂಗವು ಆಯೋಜಿಸಿದ್ದ 11ನೇ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA)ನ ಭಾರತ ಪ್ರಾದೇಶಿಕ ಸಮ್ಮೇಳನದ ಸಮಾರೋಪ ಅಧಿವೇಶನದಲ್ಲಿ ಶ್ರೀ ಬಿರ್ಲಾ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇಂತಹ ಸಮ್ಮೇಳನಗಳ ಮೂಲಕ, ಭವಿಷ್ಯದಲ್ಲಿ ಯೋಜಿತ ಅಡೆತಡೆಗಳಿಲ್ಲದೆ ಶಾಸಕಾಂಗಗಳು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು ಗುರಿಯಾಗಿದೆ ಎಂದು ಅವರು ಹೇಳಿದರು.
2025 ರ ಸೆಪ್ಟೆಂಬರ್ 11 ರಿಂದ 13 ರವರೆಗೆ ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಸಮ್ಮೇಳನವು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರ ಸಮಾರೋಪ ಭಾಷಣದೊಂದಿಗೆ ಮುಕ್ತಾಯಗೊಂಡಿತು. ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರು ಮತ್ತು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಕೂಡ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಿಪಿಎ ಭಾರತ ಪ್ರಾದೇಶಿಕ ಅಧ್ಯಕ್ಷರಾಗಿ, ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಸೈದ್ಧಾಂತಿಕ ಅಥವಾ ರಾಜಕೀಯ ಭಿನ್ನಾಭಿಪ್ರಾಯಗಳ ಆಧಾರದ ಮೇಲೆ ಕಲಾಪಗಳನ್ನು ನಿಲ್ಲಿಸುವ/ಸ್ಥಗಿತಗೊಳಿಸುವ ಬದಲು, ಶಾಸಕರು ಸದನವು ಕಾರ್ಯನಿರ್ವಹಿಸುವಂತೆ ಮಾಡಲು ಸಂಕಲ್ಪ ಮಾಡಬೇಕು ಎಂದು ಹೇಳಿದರು.ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಲೋಕಸಭಾ ಸ್ಪೀಕರ್, ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಚೈತನ್ಯಶೀಲ ಸಂವಿಧಾನವು ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ಜಗತ್ತಿಗೆ ಮಾರ್ಗದರ್ಶಕ ದೀಪವಾಗಿದೆ ಎಂದು ಬಣ್ಣಿಸಿದರು. ಭಾರತದ ಪ್ರಾಚೀನ ಪ್ರಜಾಪ್ರಭುತ್ವ ವ್ಯವಸ್ಥೆಯು ನಮ್ಮ ಶಾಸಕಾಂಗ ಚೌಕಟ್ಟನ್ನು ಪ್ರೇರೇಪಿಸುತ್ತಿದೆ ಮತ್ತು ಮಾರ್ಗದರ್ಶನ ಮಾಡುತ್ತಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು.

2047 ರ ವೇಳೆಗೆ ‘ವಿಕ್ಷಿತ ಭಾರತ’ವನ್ನು ನಿರ್ಮಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಸದನಗಳಲ್ಲಿ ಸಕಾರಾತ್ಮಕ ಮತ್ತು ಜನ-ಕೇಂದ್ರಿತ ಚರ್ಚೆಗಳ ಮೂಲಕ ಈ ನಿರ್ಣಯವನ್ನು ಕಾರ್ಯರೂಪಕ್ಕೆ ತರುವಂತೆ ಎಲ್ಲಾ ರಾಜ್ಯ ಶಾಸಕಾಂಗಗಳ ಅಧ್ಯಕ್ಷಾಧಿಕಾರಿಗಳಿಗೆ/ಸಭಾಧ್ಯಕ್ಷರಿಗೆ ಕರೆ ನೀಡಿದರು. ಶಾಸಕಾಂಗ ಅಧಿವೇಶನಗಳಲ್ಲಿ ಚರ್ಚೆಗಳ ಅವಧಿ ಮತ್ತು ಅಧಿವೇಶನಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸಮ್ಮೇಳನದಲ್ಲಿ ನಾಲ್ಕು ನಿರ್ಣಯಗಳನ್ನು ಅಂಗೀಕರಿಸಲಾಯಿತು:
1. ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸಲು ಸದನಗಳೊಳಗಿನ ಅಡೆತಡೆಗಳು ಮತ್ತು ಅಡಚಣೆಗಳನ್ನು ನಿವಾರಿಸುವುದು.
2. ಸಂಸತ್ತಿನ ಸಹಯೋಗದೊಂದಿಗೆ ರಾಜ್ಯ ಶಾಸಕಾಂಗ ಸಂಸ್ಥೆಗಳ ಸಂಶೋಧನೆ ಮತ್ತು ಉಲ್ಲೇಖ ಶಾಖೆಗಳನ್ನು ಬಲಪಡಿಸುವುದು.
3. ಶಾಸಕಾಂಗ ಸಂಸ್ಥೆಗಳಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಹೆಚ್ಚಿನ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು.
4. ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಯುವಜನರು ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು.
ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ, ಸಂಸತ್ತು ಮತ್ತು ಶಾಸಕಾಂಗಗಳ ಪಾತ್ರ ವಿಸ್ತರಿಸಿದೆ ಎಂದು ಶ್ರೀ ಬಿರ್ಲಾ ಹೇಳಿದರು. ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ, ಹವಾಮಾನ ಬದಲಾವಣೆ, ಡಿಜಿಟಲ್ ಹಕ್ಕುಗಳು ಮತ್ತು ಸಾಂವಿಧಾನಿಕ ಸುಧಾರಣೆಗಳಂತಹ ವಿಷಯಗಳು ಈಗ ನಮ್ಮ ಚರ್ಚೆಗಳ ಕೇಂದ್ರಬಿಂದುವಾಗಿವೆ. ಈ ಸಂಕೀರ್ಣ ಸವಾಲುಗಳನ್ನು ಪರಿಹರಿಸಲು ಸಮಿತಿ ಆಧಾರಿತ ಚರ್ಚೆಗಳು, ತಜ್ಞರೊಂದಿಗೆ ಸಂವಾದಗಳು ಮತ್ತು ಸ್ಥಳೀಯ ಪ್ರತಿನಿಧಿಗಳ ಹೆಚ್ಚಿನ ಭಾಗವಹಿಸುವಿಕೆಯ ಅಗತ್ಯವಿರುತ್ತದೆ ಎಂದರು.
ಚರ್ಚೆಗಳು ಎಲ್ಲರನ್ನೂ ಒಳಗೊಳ್ಳುವಂತೆ ಮತ್ತು ಸಮಾಜದ ಪ್ರತಿಯೊಂದು ವರ್ಗವು ತನ್ನ ಅಭಿಪ್ರಾಯಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವಂತೆ ಮಾಡಲು ಯುವಜನರು, ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ ನಾಯಕತ್ವದ ಅವಕಾಶಗಳನ್ನು ಒದಗಿಸುವ ಅಗತ್ಯವನ್ನು ಶ್ರೀ ಬಿರ್ಲಾ ಒತ್ತಿ ಹೇಳಿದರು.
ಶಾಸಕಾಂಗವು ಕೇವಲ ರಾಜಕೀಯ ಸಂಘರ್ಷದ ತಾಣವಾಗಿರದೆ, ತಮ್ಮ ಧ್ವನಿಗೆ ಪ್ರಬಲ ವೇದಿಕೆಯಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಎಂದು ಸ್ಪೀಕರ್ ಒತ್ತಿ ಹೇಳಿದರು.

ಅಧ್ಯಕ್ಷಾಧಿಕಾರಿಗಳು/ ಅಧ್ಯಕ್ಷತೆ ವಹಿಸುವವರ ಪಾತ್ರದ ಕುರಿತುನ್ಯಾಯಸಮ್ಮತತೆ, ತಾಳ್ಮೆ ಮತ್ತು ನ್ಯಾಯಯುತ ನಡವಳಿಕೆಯು ಸದನದ ಘನತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀ ಬಿರ್ಲಾ ಒತ್ತಿ ಹೇಳಿದರು. ಪ್ರತಿಯೊಬ್ಬ ಸದಸ್ಯರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ, ಎಲ್ಲಾ ಸದಸ್ಯರು ನಿಯಮಗಳ ಬಗ್ಗೆ ತಿಳಿದಿರಬೇಕು ಮತ್ತು ಆ ನಿಯಮಗಳನ್ನು ನ್ಯಾಯಯುತವಾಗಿ ಪಾಲಿಸಬೇಕು, ವೈಯಕ್ತಿಕ ಅಭಿಪ್ರಾಯಗಳಿಗಿಂತ ಸಾಂವಿಧಾನಿಕ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಎಂದರು.
ಈ ಮೂರು ದಿನಗಳ ಸಮ್ಮೇಳನದ ವಿಷಯ ಶೀರ್ಷಿಕೆ – “ಶಾಸಕಾಂಗ ಸಂಸ್ಥೆಗಳಲ್ಲಿ ಸಂವಾದ ಮತ್ತು ಚರ್ಚೆ: ಸಾರ್ವಜನಿಕ ನಂಬಿಕೆಯ ಅಡಿಪಾಯ ಮತ್ತು ಸಾರ್ವಜನಿಕ ಆಕಾಂಕ್ಷೆಗಳನ್ನು ಪೂರೈಸುವ ಸಾಧನಗಳು.”
22 ವಿಧಾನಸಭಾ ಸ್ಪೀಕರ್‌ಗಳು, 16 ಉಪ ಸ್ಪೀಕರ್‌ಗಳು, 4 ಅಧ್ಯಕ್ಷರು ಮತ್ತು 3 ಉಪ ಅಧ್ಯಕ್ಷರು ಸೇರಿದಂತೆ 26 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 45 ಅಧ್ಯಕ್ಷತಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂಬುದು ಗಮನೀಯ ಸಂಗತಿ.